ಅಮೆಜಾನ್

	ಗ್ರೀಸ್ ದೇಶದ ಪುರಾಣಸಾಹಿತ್ಯದಲ್ಲಿ ಉಲ್ಲೇಖಿತರಾಗಿರುವ ಸ್ತ್ರಿಯೋಧರು. ತಮ್ಮ ರಾಜ್ಯದಲ್ಲಿ (ಏಷ್ಯ ಮೈನರ್) ಪುರುಷರನ್ನು ಇರಗೊಡುತ್ತಿರಲಿಲ್ಲ. ಸಂತಾನಕ್ಕಾಗಿ ನೆರೆದೇಶಗಳ ಪುರುಷರೊಂದಿಗೆ ಸಂಬಂಧ ಬೆಳೆಸಿ, ಹುಟ್ಟಿದ ಹೆಣ್ಣುಮಕ್ಕಳನ್ನು ಇಟ್ಟುಕೊಂಡು ಗಂಡುಮಕ್ಕಳನ್ನು ಕೊಂದುಹಾಕುತ್ತಿದ್ದರು; ಇಲ್ಲವೆ ದೇಶದ ಹೊರಕ್ಕೆ ಅಟ್ಟಿಬಿಡುತ್ತಿದ್ದರು. ಬೇಟೆಯಾಡುವುದು ಯುದ್ಧ ಮಾಡುವುದು ಪ್ರಧಾನ ಹವ್ಯಾಸಗಳು. ಇಂಥ ದೇಶಗಳಿದ್ದವೆಂಬುದನ್ನು ನಂಬುವುದೇ ಸಾಧ್ಯವಿಲ್ಲ. ಆದರೂ ಹೋಮರನ ಕಾಲದಿಂದಲೂ ಪುರಾಣ ಸಾಹಿತ್ಯದಲ್ಲಿ ಅವರ ಪ್ರಸ್ತಾಪವಿದೆ. ಗ್ರೀಸಿನ ಆಗ್ನೇಯ ಭಾಗವಾದ ಅಟಿಕಕ್ಕೆ ಅವರು ಕ್ರಿ.ಪೂ. 1256ರಲ್ಲಿ ನುಗ್ಗಿದ್ದರೆಂದೂ ಅವರನ್ನು ಹೊಡೆದಟ್ಟಲಾಯಿತೆಂದೂ ಪೆರಾಸ್‍ನ ಶಿಲಾಲೇಖವೊಂದರಿಂದ ತಿಳಿದುಬರುತ್ತದೆ. ಗ್ರೀಸಿನ ಪ್ರಸಿದ್ಧ ವೀರ ಹಕ್ರ್ಯುಲೀಸ್ ಮಾಡಬೇಕಾಗಿದ್ದ ಹನ್ನೆರಡು ಸಾಹಸಕಾರ್ಯಗಳಲ್ಲಿ, ಅಮೆeóÁನ್ ರಾಣಿಯ ಕಟಿಬಂಧವನ್ನು ತರುವುದೊಂದು. ಥೀಸಿಯಸ್ ಎಂಬ ವೀರ ಅವಳನ್ನೊ ಅವಳ ತಂಗಿಯನ್ನೊ ಮದುವೆಯಾದನೆಂದು ಕಥೆ. ಗ್ರೀಕರಿಗೂ ಟ್ರಾಯ್ ದೇಶದವರಿಗೂ ನಡೆದ ಯುದ್ಧದಲ್ಲಿ ಟ್ರೋಜನರ ಸೈನ್ಯದಲ್ಲಿ ಒಂದು ದೊಡ್ಡ ಅಮೆeóÁನ್ ಪಡೆಯೇ ಇತ್ತೆಂದೂ ಅದರ ದಂಡನಾಯಕಿಯಾದ ಪೆಂತಸೀಲಿಯ ಎಂಬುವಳನ್ನು ಅಕಿಲೀಸ್ ಕೊಂದನೆಂದೂ ಆಗಿನ ಬರೆಹಗಳಿಂದ ತಿಳಿದುಬರುತ್ತದೆ. ಭಾರತೀಯರಲ್ಲೂ ಇಂಥ ಸ್ತ್ರೀರಾಜ್ಯದ ಕಲ್ಪನೆಯಿತ್ತೆಂಬುದು ಪ್ರಮೀಳಾರ್ಜುನೀಯ ಕಥೆಯಿಂದ ಕಂಡುಬರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ